ಹಾಕಿನ್ಸ್, ಜಾನ್
	1532-95. ಇಂಗ್ಲೆಂಡಿನ ಪ್ರಸಿದ್ಧ ಹಡಗು ನಿರ್ಮಾಣಕಾರ ಹಾಗೂ ನಾವಿಕ. ಇವನು 1532ರಲ್ಲಿ ಪ್ಲೈಮೌತ್ ಎಂಬಲ್ಲಿ ಜನಿಸಿದ. ತಂದೆ ವಿಲಿಯಂ ಹಾಕಿನ್ಸ್. ಈತ ಆರಂಭದಲ್ಲಿ ತನ್ನ ತಂದೆಯಂತೆಯೇ ಗುಲಾಮರ ವ್ಯಾಪಾರದಲ್ಲಿ ತೊಡಗಿದ್ದ. ಸಮುದ್ರಯಾನದಲ್ಲಿ ನುರಿತಿದ್ದ. ಇವನು ಐಶ್ವರ್ಯ ತುಂಬಿದ ಸ್ಪೇನ್ ಹಡಗುಗಳನ್ನು ಕೊಳ್ಳೆ ಹೊಡೆಯುತ್ತಿದ್ದ. ಇವನು ನೌಕಾಯಾತ್ರೆಗಳಲ್ಲಿ ಯಶಸ್ವಿಯಾಗಿದ್ದರಿಂದ ಗೌರವಸೂಚಕ ಪದಕಗಳನ್ನು ಪಡೆದ. ಎಲ್ಲಕ್ಕಿಂತ ಮಿಗಿಲಾಗಿ ಇವನ ಸಾಧನೆ ಎಂದರೆ ಭಾರತದಲ್ಲಿ ಮೊಗಲರ ಸಾಮ್ರಾಟನಾದ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿ, ಬ್ರಿಟಿಷ್ ವ್ಯಾಪಾರ ವಿಸ್ತರಣೆಗೆ ಅವಕಾಶ ಕಲ್ಪಿಸಿಕೊಂಡಿದ್ದು. ಇವನು ಹಾಗೂ ಥಾಮಸ್ ರೋ ಜಹಾಂಗೀರನ ವಿಶ್ವಾಸಕ್ಕೆ ಪಾತ್ರನಾಗಿ ಸೂರತ್ತಿನಲ್ಲಿ ವ್ಯಾಪಾರ ಕೋಠಿಗಳನ್ನು ನಿರ್ಮಿಸಿದರು. ಎಲಿಜಬೆತ್ ರಾಣಿಯಿಂದ ಆರ್ಜಿತವಾಗಿ ಬಂದ ಹಡಗುಗಳ ಪುನರ್ ನಿರ್ಮಾಣಕ್ಕೆ ಇವನೇ ಕಾರಣಕರ್ತ. ಈ ಅವಧಿಯಲ್ಲೆ ಇಂಗ್ಲೆಂಡಿಗೂ ಸ್ಪೇನ್‍ಗೂ ಯುದ್ಧ ಆರಂಭವಾಯಿತು. ವೇಗದ ಯುದ್ಧ ನೌಕೆಗಳ ಮೇಲ್ವಿಚಾರಕನಾಗಿ ಇವನನ್ನು ನೇಮಿಸಲಾಗಿತ್ತು. ಇವನನೇತೃತ್ವದಲ್ಲಿ ಹೋರಾಡಿದ ಬ್ರಿಟಿಷರಿಗೆ ಜಯ ಲಭಿಸಿತು. ಸ್ಪೇನ್ ದೇಶದ ಆರ್ಮಡ್‍ನಿಗೆ ಸೋಲುಂಟಾಯಿತು. ಈ ಸಾಧನೆಯಿಂದ ಇವನ ಕೀರ್ತಿ ಹೆಚ್ಚಿತು. ಇವನು ಸ್ಪೇನ್‍ಗೆ ಸೇರಿದ ವೆಸ್ಟ್‍ಇಂಡಿಸ್ ವಶಪಡಿಸಿಕೊಳ್ಳಲು ಡ್ರೇಕನೊಂದಿಗೆ ಹೋದಾಗ 1595ರಲ್ಲಿ ನಿಧನನಾದ.								
		(ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ